ಕ್ರೈಸ್ತ ಸಮತಾವಾದ
ಕೈಸ್ತ ಮತದಲ್ಲಿ ಹೇಳಿರುವ ಸಾಮಾಜಿಕ ಧಾರ್ಮಿಕ ರೀತಿನೀತಿಗಳನ್ನು ಅನುಸರಿಸಿ ಹುಟ್ಟಿಕೊಂಡ ಅನೇಕ ಸಮಾಜವಾದಿ ಧೋರಣೆಗಳಿಗೆ ಈ ಹೆಸರಿದೆ (ಕ್ರಿಶ್ಚನ್ ಸೋಷಿಯಲಿಸಂ). ಸಮತಾವಾದದ ಮುನ್ ಸೂಚನೆಗಳು ಕೈಸ್ತಮತದ ಆರಂಭಕಾಲದಲ್ಲಿ ಏರ್ಪಟ ಕೈಸ್ತಭ್ರಾತೃವರ್ಗ, ಕೈಸ್ತಮಿತ್ರ ಮಂಡಲಿಗಳಲ್ಲೂ ಮಧ್ಯಯುಗದ ತೀವ್ರಗಾಮಿ ಕೈಸ್ತ ಗುಂಪುಗಳಲ್ಲೂ ಹದಿನೇಳನೆಯ ಶತಮಾನದ ಸುಧಾರಿತ ಪ್ರಾಟೆಸ್ಟಂಟ್ ಎಡಪಕ್ಷದಲ್ಲೂ ಕಂಡುಬರುತ್ತವೆ. ಕ್ರಿಶ್ಚನ್ ಸೋಷಿಯಲಿಸಂ ಎಂಬ ಪದ ಮೊಟ್ಟಮೊದಲಿಗೆ ಉಪಯೋಗವಾದದ್ದು ಆಂಗ್ಲೇಯರಾದ ಜೆ.ಎಫ್.ಡಿ ಮಾರಿಸ್, ಕಾದಂಬರಿಕಾರ ಚಾರಲ್ಸ್ ಕಿಂಗ್ಸ್‍ಸ್ಲಿ, ಜೆ.ಎಂ ಲಡ್‍ಲೊ ಮುಂತಾದವರ ಭಾಷಣಗಳಲ್ಲಿ ಮತ್ತು ಬರೆವಣಿಗೆಗಳಲ್ಲಿ, ಕೈಗಾರಿಕೆ ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿ ಕೆಲಸಗಾರರ ಸಮಾಜವನ್ನು ಕೈಸ್ತ ಸಾಮ್ರಾಜ್ಯವನ್ನಾಗಿ ಮಾರ್ಪಡಿಸುವುದೇ ಅವರ ಮುಖ್ಯ ಉದ್ದೇಶವಾಗಿತ್ತು. ಶ್ರಮಜೀವಿಗಳು ಗೊಣಗದಂತೆ ಅವರನ್ನು ಶಮನಮಾಡುವ ಒಂದು ಬಗೆಯ ಅಫೀಮು. ಈ ಕೈಸ್ತಮತ ಎಂದು 1844ರಲ್ಲಿ ಕಾರ್ಲ್ ಮಾಕ್ರ್ಸ್ ಸಾರಿದ. ನಾಲ್ಕು ವರ್ಷಗಳ ಅನಂತರ ಅದಕ್ಕೆ ಪ್ರತಿಯಾಗಿ ಕಿಂಗ್‍ಸ್ಲಿ ಮತಧರ್ಮ ಎಂಬುದು ಬಡವರಲ್ಲಿ ಸಹನೆ ಮೂಡಿಸಲು ಏರ್ಪಟ್ಟ ಅಫೀಮಲ್ಲವೆಂದು ಘೋಷಿಸಿದ. ಸಾಂಪ್ರದಾಯಿಕ ಧರ್ಮಸಭೆಗಳು (ಚರ್ಚ್) ಕೈಗಾರಿಕೆ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಬಡವರಿಗೆ ಆಗುತ್ತಿರುವ ಅನ್ಯಾಯವನ್ನು ಕಣ್ಣಾರ ಕಂಡರೂ ಉದಾಸಿನರಾಗಿರುವುದನ್ನು ಕಿಂಗ್‍ಸ್ಲಿ ಮತ್ತು ಇತರ ದೀನಬಂಧುಗಳು ತೀವ್ರವಾಗಿ ಖಂಡಿಸಿದರು. ಯೇಸು ಬೋಧಿಸಿದ ಸ್ವಾರ್ಥತ್ಯಾಗ, ಸಹಕಾರ, ಭ್ರಾತೃಭಾವನೆಗಳು ಬರಿಯ ಬಾಯಿಮಾತುಗಳಾಗದೆ ಕೈಗಾರಿಕೆ ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿ ಕಾರ್ಯಕಾರಿಗಳಾಗಬೇಕೆಂದು ವಾದಿಸಿದರು. ಸಹಕಾರ ಸಂಘಗಳನ್ನು ಸ್ಥಾಪಿಸಿದುದಲ್ಲದೆ ಕೈಗಾರಿಕೆಗಳ ಮಾಲೀಕರನ್ನು ಅವರು ಗಳಿಸಿದ ಲಾಭದಲ್ಲಿ ಗೊತ್ತಾದ ಭಾಗವನ್ನು ಕೆಲಸಗಾರರಲ್ಲಿ ಹಂಚಬೇಕೆಂದು ಒತ್ತಾಯಪಡಿಸಿದರು. ಕೆಲಸಗಾರರ ಹಿತಸಾಧನೆಗಾಗಿ ಒಂದು ಸಮಿತಿಯನ್ನು ಸ್ಥಾಪಿಸಿದರು. ಇಷ್ಟೆಲ್ಲ ಪ್ರಯತ್ನದ ಪರಿಣಾಮವಾಗಿ 1852ರಲ್ಲಿ ಇಂಡಸ್ಟ್ರಿಯಲ್ ಅಂಡ್ ಪ್ರಾವಿಡೆಂಟ್ ಪಾಟ್ರ್ನರ್‍ಷಿಪ್ ಮಸೂದೆ ಪಾರ್ಲಿಮೆಂಟಿನ ಒಪ್ಪಿಗೆ ಪಡೆಯಿತು. ಕೆಲಸಗಾರರ ವಿದ್ಯಾಭ್ಯಾಸಕ್ಕಾಗಿ ಲಂಡನಿನಲ್ಲಿ 1859ರಲ್ಲಿ ವರ್ಕಿಂಗ್‍ಮೆನ್ಸ್ ಕಾಲೇಜನ್ನು ಸ್ಥಾಪಿಸಿದರು. 1877ರಲ್ಲಿ ಸ್ಟೂಯರ್ಟ್ ಹೆಡ್‍ಲ್ಯಾಮ್ ಎಂಬಾತ ಸೇಂಟ್ ಮ್ಯಾಥೂ ಗಿಲ್ಡ್ ಎಂಬ ಕೆಲಸಗಾರರ ಸಂಸ್ಥೆಯನ್ನು ಸ್ಥಾಪಿಸಿದೆ. ಇದರ ಮೂಲ ತತ್ತ್ವಗಳು ಬರ್ನಾರ್ಡ್ ಷಾನ ಫೇಬಿಯನ್ ಸೋಷಿಯಲಿಸಮ್ ಮತ್ತು ಮಾರಿಸ್‍ನ ಸಮತಾವಾದಕ್ಕೆ ಅನುಗುಣವಾದವು. ಸ್ವಲ್ಪಕಾಲದಲ್ಲೆ ಇವನ ಸಮತಾ ತತ್ತ್ವಕ್ಕೆ ಕೈಸ್ತ ಸಂಘಗಳ ಬೆಂಬಲ ದೊರೆಯಿತು. 1889ರಲ್ಲಿ ಕ್ರಿಶ್ಚನ್ ಸೋಷಿಯಲ್ ಯೂನಿಯನ್ ಎಂಬ ಸಂಸ್ಥೆಗಳು ಜನ್ಮತಾಳಿದುವು. ಹೀಗೆ ಕೆಲಸಗಾರರ ಹಿತಸಾಧನೆ ಕೈಸ್ತಧರ್ಮದ ಒಂದು ಮುಖ್ಯ ಅಂಶ ಎಂಬುದನ್ನು ಅನೇಕ ಚರ್ಚುಗಳ ಒಪ್ಪಿಕೊಂಡವು. ಇದುವರೆಗೆ ಮಾಕ್ರ್ಸ್‍ನ ಸಮತಾವಾದ ಕೈಸ್ತಮತಕ್ಕೆ ವಿರುದ್ಧವೆಂಬ ಭಾವನೆ ಇತ್ತು. 1930ರಲ್ಲಿ ಫ್ರೀಚರ್ಚಿನ ಮುಖಂಡನಾದ ಜಾನ್ ಮ್ಯಾಕ್‍ಮರೆ ಮಾಕ್ರ್ಸ್‍ವಾದ ಕೆಲವು ಅಂಶಗಳಲ್ಲಿ ಕೈಸ್ತಮತಕ್ಕೆ ಸಂಗತವೆಂದು ವಾದಿಸಿದ. ಇಂಗ್ಲೆಂಡಿನ ಕೈಸ್ತ ಸಮಾಜವಾದ ಕೆಲಸಗಾರರಿಗೆ ಹೆಚ್ಚು ಅನುಕೂಲವನ್ನು ಕಲ್ಪಿಸಲೂ ಕಾರ್ಖಾನೆಗಳು ಗಳಿಸಿದ ಲಾಭ ಕೆಲಸಗಾರರಲ್ಲಿ ಹಂಚಿಕೆಯಾಗಬೇಕೆಂದು ಒತ್ತಾಯಪಡಿಸಲೂ ಪ್ರಯತ್ನಿಸಿತೇ ಹೊರತು ಕೈಗಾರಿಕೆಗಳ ಮಾಲೀಕತ್ವವನ್ನು ಅವರಿಗೆ ದೊರಕಿಸಲು ಪ್ರಯತ್ನಿಸಲಿಲ್ಲ.

	ಇಂಗ್ಲೆಂಡಿನಲ್ಲಿ ಹುಟ್ಟಿದ ಕೈಸ್ತಸಮತಾವಾದ ಫ್ರಾನ್ಸ್, ಜರ್ಮನಿ, ನಾರ್ವೆ, ಸ್ವೀಡನ್ ಮುಂತಾದ ಐರೋಪ್ಯ ದೇಶಗಳಿಗೂ ಅಮೆರಿಕಕ್ಕೂ ಹಬ್ಬಿತು. ಫ್ರಾನ್ಸಿನಲ್ಲಿ 1888ರಲ್ಲಿ ಸ್ಥಾಪಿತವಾದ ಪ್ರಾಟೆಸ್ಟಂಟ್ ಅಸೋಸಿಯೇಷನ್ ಫಾರ್ ದಿ ಪ್ರ್ಯಾಕ್ಟಿಕಲ್ ಸ್ಟಡಿ ಆಫ್ ಸೋಷಿಯಲ್ ಕ್ವಶ್ಚನ್ ಎಂಬ ಸಂಘ ಸಮಾಜಸುಧಾರಣೆಯ ಕಾರ್ಯದಲ್ಲಿ ಮಾತ್ರ ಆಸಕ್ತಿ ವಹಿಸಿತ್ತು. ಆದರೂ ಅದರ ಮುಖಂಡನಾದ ಟಿ.ಫ್ಯಾಲಟ್ ಸಮತಾವಾದವನ್ನು ಮೊಟ್ಟಮೊದಲಿಗೆ ಫ್ರಾನ್ಸ್ ದೇಶದಲ್ಲಿ ಸಾರಿದ. ಒಂದನೆಯ ಮಹಾಯುದ್ಧಾನಂತರ ಸಮತಾವಾದ ಫ್ರಾನ್ಸಿನಲ್ಲಿ ಬಲಗೊಂಡಿತು. ಇಪ್ಪತ್ತನೆಯ ಶತಮಾನದ ಮೂರನೆಯ ದಶಕದಲ್ಲಿ ಆಂಡ್ರಿ ಫಿಲಿಪ್ ಎಂಬ ಅರ್ಥಶಾಸ್ತ್ರಜ್ಞನೂ ಕೈಸ್ತಮತ ಮೀಮಾಂಸಕನೂ ಕೆಲಸಗಾರರ ಮುಂದಾಳಾಗಿ ಅವರಲ್ಲಿ ಒಗ್ಗಟ್ಟನ್ನೂ ಕುದುರಿಸಿದ. ಜರ್ಮನಿಯಲ್ಲಿ 19ನೆಯ ಶತಮಾನದ ಕೊನೆಯ ಭಾಗದಲ್ಲಿ ಸಮಾಜವಾದವನ್ನು ಎತ್ತಿಹಿಡಿದವರು ಪ್ರಾಟೆಸ್ಟೆಂಟ್ ಪಂಗಡಕ್ಕೆ ಸೇರಿದ ರೂಡಾಲ್ಫ್ ಟಾಡ್ಟ್ ಮತ್ತು ಫ್ರೆಡರಿಚ್ ನಾಮನ್. ಇಪ್ಪತ್ತನೆಯ ಶತಮಾನದ ಆದಿಯಲ್ಲಿ ಜೂರಿಚ್ಚಿನ ಸವೊನರೋಲ (ಸುಧಾಕರ) ಎಂದು ಪ್ರಸಿದ್ಧನಾದ ಹರ್ಮನ್ ಕುಟ್ಟರ್ ಪ್ರಜಾಸಮಾಜವಾದವನ್ನು (ಡೆಮೊಕ್ರಟಿಕ್ ಸೋಷಿಯಲಿಸಮ್) ಬಲಪಡಿಸಿದ. ಒಂದನೆಯ ಮಹಾಯುದ್ಧಾನಂತರ ಕೈಸ್ತ ಸಮತಾವಾದ ಅನೇಕ ರೂಪಗಳನ್ನು ತಾಳಿತು. ಕೆಲವರು ಸಮತಾವಾದ ನೇರವಾಗಿ ಕೈಸ್ತಮತದಿಂದ ಅನುಗತವಾದುದೆಂದೂ ಇನ್ನು ಕೆಲವರು ಹಾಗಲ್ಲವೆಂದೂ ವಾದಿಸತೊಡಗಿದರು. ಕೈಸ್ತಸಂಘಕ್ಕೂ ಕೆಲಸಗಾರರ ಸಂಸ್ಥೆಗಳಿಗೂ ನಿಕಟಸಂಬಂಧವನ್ನು ಏರ್ಪಡಿಸುವುದೇ ಕೈಸ್ತ ಸಮತಾವಾದದ ಮುಖ್ಯ ಉದ್ದೇಶವೆಂದು ಮತ್ತೆ ಕೆಲವರು ಸಾರಿದರು. ಇತರರು ಕೈಸ್ತಮತಕ್ಕೂ ಕಾರಲ್ ಮಾಕ್ರ್ಸನ ಸಮತಾವಾದಕ್ಕೂ ನೇರ ಸಂಬಂಧವನ್ನು ಕಲ್ಪಿಸಿ, ಅವನ ಸಮತಾವಾದವನ್ನು ಕೈಸ್ತಧರ್ಮಕ್ಕೆ ಸಂಗತವಾಗಿ ರೂಪಿಸುವುದೇ ಕೈಸ್ತ ಸಮತಾವಾದದ ಮುಖ್ಯ ಕರ್ತವ್ಯವೆಂದು ಬಗೆದರು. ಮೂರನೆಯ ಬಗೆಯ ಸಮತಾವಾದಿಗಳು ದಕ್ಷಿಣ ಜರ್ಮನಿಯ ರಿಲಿಜಸ್ ಸೋಷಿಯಲಿಸ್ಟ್ ಲೀಗಿನವರು, ಈ ಗುಂಪಿನಲ್ಲಿ ಪ್ರಾಟೆಸ್ಟಂಟರೂ ಮತ್ತು ಕೆಥೊಲಿಕ್ಕರೂ ಸೇರಿದ್ದರು. ನಾಲ್ಕನೆಯ ಬಗೆಯ ಸಮತಾವಾದಿಗಳು ಬರ್ಲಿನ್ನಿನ ಕೈರೋಸ್ ಗುಂಪಿನವರು. ಅವರ ಮುಖಂಡ ಪಾಲ್ ಟಿಲಿಚ್.

	ನಾರ್ವೆ ಮತ್ತು ಸ್ವೀಡನ್ ದೇಶಗಳಲ್ಲಿ ಸಮತಾವಾದ 1930ರ ಆಚೆಗೆ ಹುಲುಸಾಗಿ ಬೆಳೆಯಿತು. ಅದಕ್ಕೆ ಕಾರಣನಾದವ ಒಂದು ಕಾಲದಲ್ಲಿ ಮಾಕ್ರ್ಸ್ ವಾದಿಯಾಗಿದ್ದ ನಿಲೋಲೈ ಬರ್ಡಿಯೇವ್. ಅವನು ವಿಶೇಷವಾಗಿ ಲಿಯೋ ಟಾಲ್ಸ್‍ಟಾಯ್ ಬರೆವಣಿಗೆಗಳಿಂದ ಪ್ರೇರಿತನಾದವ.

	ಅಮೆರಿಕದ ಸಂಯುಕ್ತಸಂಸ್ಥಾನಗಳಲ್ಲಿ ಸಮತಾವಾದವನ್ನು 1849ರಲ್ಲಿ ಬಿತ್ತಿದವರಲ್ಲಿ ಹೆನ್ರಿ ಜೇಮ್ಸ್ (ಹಿರಿಯ) ಮೊದಲನೆಯವ. ಸಮತಾವಾದ ಕೈಸ್ತಮತದ ಮುಖ್ಯ ಗುರಿಯೆಂಬುದು ಅವನ ದೃಢ ನಂಬಿಕೆ. ಇಪ್ಪತ್ತನೆಯ ಶತಮಾನದಲ್ಲಿ ಸಮತಾವಾದವನ್ನು ಪ್ರಚಾರ ಮಾಡಿದವರಲ್ಲಿ ವಾಲ್ಟರ್ ರಾಶ್ಚೆನ್ ಬುಶ್ಚ್ ಮುಖ್ಯನಾದವ. ಈತ ಕೈಸ್ತಸಮತಾವಾದಕ್ಕೂ ಲೌಕಿಕ ಸಮತಾವಾದಕ್ಕೂ ಇರುವ ಭೇದವನ್ನು ಸ್ಪಷ್ಟಪಡಿಸಿ ಸಮತಾವಾದಕ್ಕೆ ಕೈಸ್ತಧರ್ಮವೇ ಭದ್ರವಾದ ತಳಹದಿ ಎಂದು ಸಾರಿದ. ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಅವನ ಕೃಪೆಯಿಂದ ದೊರೆತ ಸಂಪತ್ತಿನಲ್ಲಿ ಎಲ್ಲರೂ ಸಮಭಾಗಿಗಳಾಗುವ ಹಕ್ಕನ್ನು ಪಡೆದಿರುತ್ತಾರೆ ಎಂದು ಬೊಧಿಸಿದ. ಇವನ ಅನುಯಾಯಿಗಳು ಇವನ ಸಮತಾವಾದವನ್ನು ಜಪಾನ್, ಚೀನ, ಭಾರತ ಮತ್ತು ದಕ್ಷಿಣ ಅಮೆರಿಕ ದೇಶಗಳಲ್ಲಿ ಪ್ರಚಾರಮಾಡಿದರು. 1933ರಲ್ಲಿ ಜರ್ಮನಿಯ ಸಮಾಜವಾದಿ ಟೆಲಿಚ್ ಅಮೆರಿಕಕ್ಕೆ ಹೋಗಿ ಅಲ್ಲಿ ಹಿಂದೆ ಹೇಳಿದ ನಾಲ್ಕನೆಯ ಬಗೆಯ ಸಂಯುಕ್ತ ಕೈಸ್ತ ಮಾಕ್ರ್ಸ್ ಸಮತಾವಾದವನ್ನು ಪ್ರಚಾರಮಾಡಿದ. ಇದಕ್ಕೆ ಅಮೆರಿಕದಲ್ಲಿ ಹೊಸ ಮಾಕ್ರ್ಸ್‍ವಾದವೆಂಬ ಹೆಸರು ಬಂತು. ಕೈಸ್ತಸಮತಾವಾದ ಅಮೆರಿಕದ ಕೆಲಗಾರರನ್ನು ಹೆಚ್ಚಾಗಿ ಆಕರ್ಷಿಸದಿದ್ದರೂ ಕೈಸ್ತಸಂಘಗಳು ಬಹು ಸಂಖ್ಯಾತರ ಆರ್ಥಿಕ ನೆಮ್ಮದಿಗೆ ಹೆಚ್ಚು ಗಮನಕೊಡುವಂತೆ ಪ್ರೇರಿಸಿದೆ. 					 (ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ